ಕನ್ನಡ ಸಾಹಿತ್ಯ ರತ್ನಗಳು

ಕನ್ನಡ ಸಾಹಿತ್ಯ ರತ್ನಗಳು
Masti, DVG, Kuvempu, Seetharamaiah, Shivarama Karanth, Krishna Rao, Rajaratnam

Sunday 30 January 2011

ಶಿವಗಂಗಾ

ಶಾಲ್ಮಲೆಯ ಸೊಬಗು ಜಲಧಾರೆಯಲ್ಲಿ ಅದ್ಭುತವಾಗಿ ಗೋಚರಿಸುತ್ತದೆ. ತನ್ನೊಡಲ ಭಯಾನಕತೆಯ ಮುಚ್ಚಿಟ್ಟು, ಜುಳು ಜುಳು ಹರಿವ ಸ್ವಚ್ಛ ನೀರು ಸಾಹಸಕ್ಕೆ ಕೈಬೀಸುತ್ತದೆ. ಶಿವಗಂಗಾ ಜಲಪಾತ ನೋಡಲು ಬನ್ನಿ.. ಬಂದವರು ಹುಡುಗಾಟ ಆಡಬೇಡಿ..



ಶಿವಗಂಗಾ ಜಲಪಾತದಲ್ಲಿ ಶಾಲ್ಮಲೆ ಸುಮಾರು 359 ಅಡಿ ಎತ್ತರದಿಂದ ಬಾಗುತ್ತ, ಬಳುಕುತ್ತಾ 3ಹಂತದ ಜಲಧಾರೆಯಾಗಿ ಧುಮುಕಿ ಕಣಿವೆಗೆ ಇಳಿಯುತ್ತಾಳೆ. ಸುಂದರ ಹಾಲ್ನೊರೆಯ ದೃಶ್ಯ ಬೇಸಿಗೆಯಲ್ಲಿ ಗೋಚರಿಸಿದರೆ, ಮಳೆಯ ಕೆನ್ನೀರು ಧುಮ್ಮಿಕ್ಕುವ ನೋಟ ಕಣ್ಣು ತುಂಬುತ್ತದೆ.



ಎರಡು ಶಿಲಾ ರಚನೆಯ ಅದ್ಭುತ ಪದರಗಳ ಮಧ್ಯೆ ಸಾಗುವ ಈ ಜಲಪಾತ ತನ್ನ ಪ್ರತಿ ಹಂತದ ತಳಭಾಗ ತಲುಪುವ ಚಪಲವನ್ನು ಪ್ರವಾಸಿಗನ ಮನದಲ್ಲಿ ಮೂಡಿಸುತ್ತದೆ. ನದಿ ತಟದ ಮುಖಾಂತರ ಕಡಿದಾದ ಶಿಲಾ ಭಾಗವನ್ನು ಏರುತ್ತಾ ಜಲಪಾತದ ನೀರ ಹನಿಗಳ ಆನಂದ ಪಡೆಯುವಾಸೆ ಮೂಡುವುದು ಸಹಜ. ಆದರೆ ಇದು ಅಪಾಯಕಾರಿ. ಎಂಥ ತಜ್ಞ ಸಾಹಸಿಯನ್ನು ಕಂಗೆಡಿಸ ಬಲ್ಲ ಪೃಕೃತಿ ಸೋಜಿಗ ಶಿವಗಂಗಾ ಜಲಪಾತ.



ಶಾಂತವಾಗಿ ಹುಡುಗಾಟಕ್ಕೆ ತೊಡಗದೆ, ದೈಹಿಕ ಸಮತೋಲನ ಮತ್ತು ಸಹಜವಾದ ರೀತಿಯಿಂದ ದಡದಲ್ಲಿನ ಸುರಕ್ಷಿತ ಶಿಲೆಗಳ ಮೇಲೆ ಕುಳಿತು ಹವ್ಯಾಸಿ ಮೀನುಗಾರಿಕೆ ನಡೆಸುತ್ತ ಆನಂದಿಸಬಹುದು. ಹೊತ್ತು ತಂದ ಬುತ್ತಿ ತಿನ್ನಬಹುದು.



ಜಲಪಾತದ ಪ್ರತಿ ಹಂತದ ಮುಂದಿನ ಶಾಂತ ಶಾಲ್ಮಲೆಯ ಒಡಲಲ್ಲಿ ಅಡಗಿದೆ ರುದ್ರತೆಯ ರಹಸ್ಯ. ಅದೇ ಆಳದ ನೀರ ಸುಳಿವಿನಿಂದ ಕೂಡಿದ ಶಿಲಾ ಪದರದ ಮಧ್ಯೆ ಅವಿತಿರುವ ಮೂರು ಗುಂಡಿಗಳೆನ್ನಿ ಅಥವಾ ಮಡುವು ಎನ್ನಬಹುದಾದ ಸ್ಥಾನಗಳು. ಶಾಲ್ಮಲೆಯ ಸೊಬಗು ಜಲಧಾರೆಯಲ್ಲಿ ಅದ್ಭುತವಾಗಿ ಗೋಚರಿಸಿದರೆ, ನದಿಯ ಪಾತ್ರ ತಲುಪಿದವರಿಗೆ ಬೇಸಿಗೆಯ ದಿನದಲ್ಲಿ ಜುಳು ಜುಳು ಹರಿವ ಸ್ವಚ್ಛ ನೀರು ಸಾಹಸಕ್ಕೆ ಕೈಬೀಸುತ್ತದೆ, ತನ್ನೊಡಲ ಭಯಾನಕತೆಯ ಮುಚ್ಚಿಟ್ಟು. ನೀರ ಮೋಹಕತೆಗೆ ಮರುಳಾಗಿ ಈಸಲೆಂದೋ, ಪಕ್ಕದ ಶಿಲಾ ಪದರದಿಂದ ಡೈವ ಹೊಡೆಯುವ ಅಥವಾ ನೀರಾಟಕ್ಕೆಂದು ಇಳಿದರೆ, ಹಿಂದೆ ಇತಿಹಾಸದ ಪುಟ ಸೇರಿದ ಘಟನೆಗಳ ಪುನರಾವರ್ತನೆ ಸಂಭವವೇ ಹೆಚ್ಚು.



ಪೋಲಿಸ ಇಲಾಖೆಯ ವರದಿಯಂತೆ 1984ರ ನಂತರ ಸುಂದರತೆಯ ಒಡಲಿನಲ್ಲಿ ಸಾಹಸಕ್ಕಿಳಿದ 10 ಮಂದಿ ನೀರು ಪಾಲಾಗಿ ಮಡುವಿನಲ್ಲಿ ಸೇರಿ ಹೋಗಿದ್ದಾರೆ. ಇವರಲ್ಲಿ ಪ್ರವಾಸಿಗರೇ ಹೆಚ್ಚು. ಅದರಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು, ಓರ್ವ ವೈದ್ಯರೂ ಸೇರಿದ್ದಾರೆ. ಅನಧಿಕೃತ ಮಾಹಿತಿ ಪ್ರಕಾರ, ಈ ಸಂಖ್ಯೆ 20ಕ್ಕೇರಿದೆ ಎನ್ನಲಾಗಿದೆ. 2004ರ ಮೇ ತಿಂಗಳಿನ ಒಂದು ವಾರದ ಅವಧಿಯಲ್ಲಿ ಮೂವರು ವಿಧ್ಯಾರ್ಥಿಗಳು ನೀರ ಮಡುವಿಗೆ ಸೇರಿದ್ದಾರೆ. ಕೇವಲ ನೀರಾಟ ಮಾಡಲೆಂದು ಇಳಿದವರಲ್ಲ, ಬುತ್ತಿಯ ನಂತರ ಕೈತೊಳೆಯುವ ಆಸೆ ತೋರಿದವರೂ ಇಲ್ಲಿ ನೀರ ಮಡಿಲೊಳಗೆ ಸೇರಿದ್ದಾರೆ.



ಈ ಜಲಪಾತದ ಕಣಿವೆಯ ನದಿಯ ಹರಿವ ಪಾತ್ರದ ತನಕ ತಲುಪುವ ಮಾರ್ಗ ಕಡಿದಾದ ಮಲೆನಾಡ ಅರಣ್ಯ ಹಾದಿಯಲ್ಲಿ ಇಳಿಯುತ್ತ ಸಾಗಬೇಕು. ಇದು ಪ್ರಯಾಸದ ದಾರಿಯಾದ್ದರಿಂದ ಎಚ್ಚರಿಕೆ ಅಗತ್ಯ. ಎಚ್ಚರಿಕೆ ಫಲಕಗಳು ಜಲಪಾತದಲ್ಲಿನ 3 ಭಯಾನಕ ಗುಂಡಿಗಳ ಮಾಹಿತಿ ನೀಡುತ್ತವೆ. ದೊರೆತ ಮಾಹಿತಿಯಂತೆ ಜಲಪಾತದ 3 ಹಂತದಲ್ಲಿ ತಲಾ ಒಂದರಂತೆ ಇರುವ ಈ ಗುಂಡಿಗಳು ಒಂದಕ್ಕಿಂತ ಒಂದು ಆಳವಾಗಿದ್ದು ಇದರ ಒಳಭಾಗದಲ್ಲಿ ನೀರ ರಭಸಕ್ಕೆ ಕಲ್ಲಿನ ಪದರ ಕೊರೆದು ಪೊಟರೆಗಳು ಉಂಟಾಗಿವೆ.



ಮೇಲೆ ಹೇಳಿದ 3 ಗುಂಡಿಗಳ ಆಳ 12ರಿಂದ 18 ಅಡಿ, 18ರಿಂದ 22 ಅಡಿ, 20ರಿಂದ 25 ಅಡಿ ಇದೆ ಎನ್ನಲಾಗುತ್ತದೆ. ಇಲ್ಲಿನ ದುರ್ಮರಣದಲ್ಲಿ ಶವ ಸಿಗುವುದು ಅತಿ ಪ್ರಯಾಸವೇ. ಶವಕ್ಕಾಗಿಯೇ ನಾಲ್ಕೈದು ದಿನ ಕಾಯಬೇಕಾದ ಅನಿವಾರ್ಯ ಸನ್ನಿವೇಶಗಳು ಎದುರಾಗಿವೆ. ನದಿ ತಾನಾಗಿಯೇ ಮೂರು ದಿನದ ನಂತರ ಶವವನ್ನು ಮೇಲೆ ತಳ್ಳುವುದು ಇಲ್ಲಿ ಅಸಾಧ್ಯ, ಎಂದರೆ ಅಪನಂಬಿಕೆ ಬೇಡ. ಇದಕ್ಕೆ ಗುಂಡಿಗಳಲ್ಲಿನ ಪೊಟರೆಯ ಶಿಲಾರಚನೆಯೇ ಕಾರಣ. ಮುಳುಗು ತಜ್ಞರನ್ನೇ ಕಂಗಾಲು ಮಾಡುವ ಈ ಜಲಪಾತದ ತಾಣ ನಿಗೂಢತೆಯ ಒಡಲು.



1 comment:

  1. ಓದಿದ ಕೂಡಲೇ ನೆನಪಿಗೆ ಬಂದ ಸಾಲು - ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು

    ReplyDelete