ಕನ್ನಡ ಸಾಹಿತ್ಯ ರತ್ನಗಳು

ಕನ್ನಡ ಸಾಹಿತ್ಯ ರತ್ನಗಳು
Masti, DVG, Kuvempu, Seetharamaiah, Shivarama Karanth, Krishna Rao, Rajaratnam

Sunday, 9 June 2013

ಹೊಸ ಜನ ಹೊಸ ಚಾರಣ ಹೊಸ "ಅನುಭವ"

ಚಿತ್ರ ಕೃಪೆ : ಗಿರೀಶ್ 

ಕಾಳಿದಾಸ ಅವನ ಮೇಘದೂತ ಕಾವ್ಯದಲ್ಲಿ ಜಾತಕ ಪಕ್ಷಿಯ ಬಗ್ಗೆ ವರ್ಣಿಸಿದಂತೆ, ಆ ಪಕ್ಷಿ ಮಳೆಗಾಲಕ್ಕೆ ಕಾದು ಕುಳಿತು, ಮಳೆ ಬಂದಾಗ ತನ್ನ ತಲೆ ಮೇಲಿರುವ ಕೊಕ್ಕೆ ತರಹದ ಪ್ರದೇಶದಿಂದ ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ. ಬೇರೆ ಸಮಯದಲ್ಲಿ  ಮಳೆಗಾಗಿ ಕಾದು, ನೀರಡಿಕೆಯಾದಾಗ ವರುಣ ದೇವನಲ್ಲಿ ಮಳೆಗಾಗಿ ಪ್ರಾರ್ಥಿಸುತ್ತದೆ. ನಮಗ ದೇವ್ರು ಕುಡಿಯಾಕ ಬಿಸ್ಲರಿ ನೀರು ಕೊಟ್ರೂ, ಜಾತಕ ಪಕ್ಷಿಯ ಗುಣ ರಕ್ತದಲ್ಲಿ ಕುಳಿತು ಬಿಟ್ಟಿದೆ. ಮಳೆಯ ನೀರು ಮಾತ್ರ ನನ್ನ ತನು ಮನದ ದಾಹವನ್ನು ತಣಿಸಬಲ್ಲದು. ಬೇಸಿಗೆಯಲ್ಲಿ ಒಂದು ಪ್ರವಾಸ ಮಾಡಿದ್ದೆ, ಆದ್ರೆ ತೃಪ್ತಿ ಸಿಕ್ಕಿರಲಿಲ್ಲ, ಯಾಕಂದ್ರೆ ಆಗ ಮಂಡೆ ಮೇಲೆ ಮೋಡ ನೋಡಿರಲಿಲ್ಲ. 

ಹಂಗೆ ಏನ್ ಮಾಡ್ಪ ಅಂತ ಯೋಚನೆ ಮಾಡ್ತಾ ಇರುವಾಗ, ಬೆಂಗಳೂರು ಚಾರಣಿಗರ ಸಂಘದಿಂದ  (www.bangaloreascenders.orgಆಹ್ವಾನ ಬಂತು. "ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆಯ ಪ್ರಥಮ ಚುಂಬನ ಪಡೆಯುವ ಸುಂದರ ಅವಕಾಶ'. ರಜ ಸಿಗತ್ತೋ ಇಲ್ವೋ ಗೊತ್ತಿರಲಿಲ್ಲ, ಆದ್ರೂ ಕಲ್ ಹೊಡೆದೇ ಬಿಡುವ ಅಂತ ಹೆಸರು ನೊಂದಾಯಿಸಿದೆ. ಆದ್ರೆ ಈ ಸಲ ಫುಲ್ ಹೊಸ ಜನ, ಆದ್ದರಿಂದ ಸ್ವಲ್ಪ ಅಳುಕಿತ್ತು. ಪಲ್ಲವಿ ಅಂತ ಆಯೋಜಕರ ಹೆಸ್ರು, ನಾಮದೇಯ ಕೇಳಿದ್ದೆ, ವ್ಯಕ್ತಿ ಪರಿಚಯ ಇರಲಿಲ್ಲ. 

ಹಿಂದಿನ ದಿನವೇ ನಮ್ಮ ನೆಚ್ಚಿನ ಹಜಾಮರ ಅಲ್ಲಲ್ಲ, ನಿಜಾಮರ ಊರು ಬಿಟ್ಟು ಕೆಂಪೇಗೌಡರ ರಾಜ್ಯಕ್ಕೆ ಕಾಲಿಟ್ಟೆ. ಒಂದೇ ಸಲ 47° ಡಿಗ್ರಿ ಇಂದ 23°ಗೆ ಬಂದಾಗ ಬರಬಾರದ ಯೋಚನೆ ಎಲ್ಲ ತಲೆಗೆ ಬರತ್ತೆ. ಆದ್ರೆ ನಮ್ದು ಒಳ್ಳೆ ಗುಣ, ಎಲ್ಲಾ  ಯೋಚನೆಗಳನ್ನು ಕಾರ್ಯರೂಪಕ್ಕೆ ತರಲ್ಲ. 


ಸಿಕ್ಕಾಪಟ್ಟೆ ಕಾಡುವ ಏಕಾಂತಕ್ಕೆ ನಾನು ಕಂಡುಕೊಂಡಿರುವ ಏಕೈಕ ಊಪಾಯ ಚಾರಣ. ಪ್ರತಿ ಬಾರಿಯೂ ಚಾರಣದಿಂದ ವಾಪಸ್ ಬಂದಾಗ ಹೊಸ ಮನುಷ್ಯ ಆಗಿರ್ತೇನೆ. 4 ದಿನ ಸಮಾಧಾನ ಸಿಗತ್ತೆ. ರಾತ್ರಿ  ಹೊರಡುವ ಸಮಯಕ್ಕೆ ಕಾಯ್ತಾ ಇದ್ದೆ. ಆಯೋಜಕರು 10 ಗಂಟೆಗೆ ಬರದೇ ಇದ್ರೆ ಬಿಟ್ಟು ಹೋಗ್ತೀನಿ ಅಂಥ ದಮ್ಕಿ ಹಾಕಿದ್ರು. ನಮ್ ರಕ್ತದಲ್ಲಿ ಸ್ವಲ್ಪ ಶಿಸ್ತು ಜಾಸ್ತಿ. 9 ಗಂಟೆಗೇ ಅಲ್ಲಿ ಹೋಗಿಬಿಡೋಣ ಅಂತ ಬೇಗ ಹೊರಟೆ. ಮರುಭೂಮಿಯಿಂದ ಬಂದ ಹುಡುಗ ಅಂತ, ಮಳೆ ಸ್ವಲ್ಪ ಜಾಸ್ತಿ ಪ್ರೀತಿ ತೋರಿ ಬೆಂಗಳೂರಿನಲ್ಲಿ ಪ್ರವಾಹ ಸ್ವರೂಪ ಪಡೆದಿತ್ತು. ನಮ್ಮ BMTC ಬಸ್ ಕೈ ಕೊಡ್ತು. ಹೆಂಗೋ ಕಷ್ಟ ಪಟ್ಟು ನೀರಿನಲ್ಲಿ ಈಜಿಕೊಂಡು ಶಾಂತಲ ಸಿಲ್ಕ್ ಹೌಸ್ ತಲುಪುವಾಗ ಸರಿಯಾಗಿ 10 ಗಂಟೆ. ಅಲ್ಲಿದ್ದದ್ದು ನಾನು ಮತ್ತು ರಾಮ್.ಉಳಿದ ಸಹ ಚಾರಣಿಗರು ಲೇಟು. 'ಪ್ರಕೃತಿ' ದಮ್ಕಿ ಹಾಕಿದ ಆಯೋಜಕರನ್ನು ಯಾವುದೋ ರಸ್ತೆಯಲ್ಲಿ ಕಟ್ಟಿ ಕೂರಿಸಿತ್ತು. 

ಎಲ್ಲ ಬಂದು ಗಾಡಿ ಬಿಡುವಾಗ 12 ಗಂಟೆ. ಬಸ್ ಬೆಂಗಳೂರು ಬಿಡುವಾಗ ಮತ್ತೆರಡು ಗಂಟೆ ಕಳೆದು ಹೋಗಿತ್ತು. ಆಯೋಜಕರು (ಪಲ್ಲವಿ) ಮನೆಯಿಂದ ಪಲಾವ್ ಮಾಡಿಕೊಂಡು ಬಂದು ಇಬ್ಬರಿಗೆ ತಿನ್ನಿಸಿ ಅವರ ಹೊಟ್ಟೆಯನ್ನು ಕೆಡಿಸಿದ್ದರು. ಆಮೇಲೆ ಪರಿಚಯ ಕಾರ್ಯಕ್ರಮ ಶುರು. ನೆರೆದಿರುವ ಜನಗಳ ಬಗ್ಗೆ ಗೊತ್ತಾಗಬಾರದ ವಿಚಾರಗಳೆಲ್ಲ ಗೊತ್ತಾದವು. 

ಕೊನೆಗೆ ಎಲ್ಲರು ನಿದ್ದೆ ಹೋಗುವ ಕಾರ್ಯಕ್ರಮ. ನನ್ನ ಕಣ್ಣು ನಿದ್ದೆ ಮಾಡಕ್ಕೆ ಒಪ್ಪಲಿಲ್ಲ. ರಾತ್ರಿ ಹೊತ್ತು ವಾಹನದ ಕಿಟಕಿಯಿಂದ ಮುಂಗಾರು ಮಳೆಯ ಸವಿಯುವ ಅನುಭವ ಪ್ರಪಂಚದ ಯಾವುದೇ ಸುಖಕ್ಕೂ ಕಡಿಮೆ ಇಲ್ಲ. ರಾತ್ರಿ ಇಡೀ ಚಾಲಕನ ಪಕ್ಕ ಕುಳಿತು ಮುಂಗಾರು ಮಳೆಯ ಹನಿಗಳ ಲೀಲೆ ನೋಡ್ತಾ ಕಾಲ ಕಳೆದೆ. 



ಚಿತ್ರ ಕೃಪೆ : ಗಿರೀಶ್ 
ಬೆಳಿಗ್ಗೆ 5.30ಕ್ಕೆ ಸಕಲೇಶಪುರ ತಲುಪಿ , ಅಲ್ಲಿ ಬೆಳ್ ಬೆಳಿಗ್ಗೆ ತೆಗೆದಿರುವ ಏಕೈಕ ಹೋಟೆಲ್ನಲ್ಲಿ ಇಡ್ಲಿ ಮತ್ತು ರೈಸ್ ಬಾತ್ ಕಟ್ಟಿಸಿಕೊಂಡು ಪಯಣವನ್ನು ಮುಂದುವರಿಸಿದೆವು. ನನ್ನ ಕೆಲಸ ಮಾಕನಮನೆ ಜಲಪಾತ ತೋರಿಸುವುದಾಗಿತ್ತು. ಸುಮಾರು 5 ವರ್ಷದ ಹಿಂದೆ ಅಲ್ಲಿಗೆ ಕಾಲಿಟ್ಟಿದ್ದೆ. ನಮ್ದು ಮೊದ್ಲೇ ಶಾರ್ಟ್ ಟರ್ಮ್ ಮೆಮೋರಿ. ನೆನ್ನೆ ನೋಡಿದ ಡರ್ಟಿ ಪಿಕ್ಚರ್ ಸೀನೇ ನೆನಪಿರಲ್ಲ. ಈ ಜಾಗ ನೆನಪಿರತ್ತಾ? ಸೊ ಸುತ್ತಾಕಿ ಸುತ್ತಾಕಿ ಒಂದು ಕಡೆ ಬಸ್ ನಿಲ್ಲಿಸಿ ಜಲಪಾತ ಹುಡುಕುವ ಕಾರ್ಯ ಶುರು ಹಚ್ಚ್ಕೊಂಡ್ವಿ. ಎಲ್ಲೂ ಜಲಪಾತದ ಸುಳಿವಿರಲಿಲ್ಲ. ಜಲಪಾತ ಹೋಗ್ಲಿ ಜಲಪಾತ ಇರುವ  ಸ್ಥಳದ ಲಕ್ಷಣವೂ ಅಲ್ಲಿ ಇರಲಿಲ್ಲ. ನಾನು ಎರಡೂ ದಿಕ್ಕಿನಲ್ಲಿ ಕೆಲವು ಕಿಲೋಮೀಟರು ಕ್ರಮಿಸಿ ಹುಡುಕಿದರೂ ಮಾಕನಮನೆ ಸಿಗಲಿಲ್ಲ. ಕೊನೆಗೆ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕಡಿದಾದ ಗುಡ್ಡ ಇಳಿದು ನೀರು ಹರಿಯುವ ಪ್ರದೇಶ ತಲುಪಿ ತಂದ ತಿಂಡಿಯನ್ನು ಹೊಟ್ಟೆಗೆ ಸೇರಿಸಿ ಅಲ್ಲಿಂದ ಕಾಲ್ಕಿತ್ತೆವು.  ಹಾದಿಯಲ್ಲಿ ಯಾವುದೋ ಜನರಿಲ್ಲದ ಮನೆಯ ಸುತ್ತ ಬೆಳೆದಿದ್ದ ಅನಾನಸ್ ಹಣ್ಣಿನ ಪ್ರಾಣ ತೆಗೆದು ಬಲಿ ಕೊಟ್ಟು ಹೊಟ್ಟೆ ಪೂಜೆ ನಡೆಸಿದ್ದ್ವಿ.  



ಚಿತ್ರ ಕೃಪೆ : ಪಲ್ಲವಿ 
ಅಲ್ಲಿಂದ ವಾಪಸ್ ಬರುವಾಗ ಒಂದು ದಾರಿದೀಪ (ಹಳ್ಳಿಗ) ಸಿಕ್ಕು ಸರಿಯಾದ ದಾರಿ ತೋರಿಸಿದರು. ನಾನು 5 ವರ್ಷದ ಹಿಂದೆ ಇಲ್ಲಿಗೆ ಬಂದಾಗ ಇದು ಸುಂದರವಾದ ಅಜ್ಞಾತ ಸ್ಥಳ ಮನುಜ ರಹಿತ ಪ್ರಕೃತಿ ಸಹಿತ ಸುಂದರ ಜಾಗ. ಈ ಸಲ ಹೋದವನಿಗೆ ಸಿಕ್ಕಾಪಟ್ಟೆ ಬೇಸರವಾಯಿತು . ಮಲ್ಯನ ಬಾಟ್ಲು ಎಲ್ಲಾ ಕಡೆ ಬಿದ್ದಿತ್ತು. ಕಾಡಿರುವ ಜಾಗದಲ್ಲಿ ರೆಸಾರ್ಟ್, ನಗರದ ಬೇವರ್ಸಿಗಳು ಇಲ್ಲೂ ಬಂದು ತಮ್ಮ ಕೀಳು ಸಂಸ್ಕ್ರತಿಯನ್ನು ತೋರಿಸಿದ್ದರು. ಗುಂಪಿನಲ್ಲಿ ಯಾರಿಗೂ  ಸ್ಥಳ ಇಷ್ಟವಾದ ಹಾಗೆ ಕಾಣಲಿಲ್ಲ. ಹಾಗೆಯೇ ನೀರು ಸಹಾ ಸಿಕ್ಕಾಪಟ್ಟೆ ಕಡಿಮೆಯಿತ್ತು. ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ..... 






ಚಿತ್ರ ಕೃಪೆ : ಗಿರೀಶ್ 
ಆಮೇಕೆ ಕಾಗಿನಹಾರೆಯ ಕಡೆಗೆ ಎಮ್ಮ ಪಯಣ. ಅಲ್ಲಿ ಯಕ್ಕಾಚಿಕ್ಕಿ ಚಪಾತಿ ತಿಂದು ನೀರು ಕುಡಿದು ನಮ್ಮ ಮೊದಲ ಗುರಿಯಾದ ಕಾಗಿನಹಾರೆಯ  ೋಟೆಯ ಕಡೆ ಚಿತ್ತ ಹರಿಸಿದೆವು. ಸಂಪೂರ್ಣ ಮಂಜಿನಿಂದ ಕೂಡಿದ ವಾತಾವರಣ, ಕೋಟೆ ಯಾವ ಕಡೆ ಇದೆ ಎಂದು ಗೋಚರಿಸಲಿಲ್ಲ. ಆದ್ರು ಹಾಗೆಯೇ ಮುಂದೆ ಪಯಣಿಸಿ ಕಾಗಿನಹಾರೆ ೌಡೇಶ್ವರಿ ದೇವಾಲಯದವರೆಗೆ ನಡೆದು, ಒಂದು ಮಕ್ಕೊಂಡಿದ್ದ ಹಾವನ್ನು ಎಚ್ಚರಿಸಿ :), ಮತ್ತೆ ಊರಿನ ಕಡೆಗೆ ಗಾಡಿ ಬಿಟ್ಟೆವು. ದಾರಿಯಲ್ಲಿ ಕೋಟೆ ಗೋಚರಿಸಿತು, ಕೋಟೆಯ ತಳಪಾಯ ಮಾತ್ರ ಉಳಿದುಕೊಂಡಿದ್ದು, ಉಳಿದವು ಕಾಲಚಕ್ರದ ಚಲನೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿವೆ. ಆದರೆ ಕೋಟೆಯು ಒಂದು ಎತ್ತರವಾದ ಪರ್ವತದ ಮೇಲಿದ್ದು ಅಲ್ಲಿಂದ ಸುತ್ತಲಿನ ಅದ್ಭುತ ಚಿತ್ರಣವು ಕಾಣಿಸುತ್ತದೆ. ಮಂಜು ಮುಸುಕಿದ್ದರಿಂದ ನಮಗೆ ಆ ಚಿತ್ರಣವು ಲಭ್ಯವಾಗಲಿಲ್ಲ. 

ಕಾಗಿನೆರೆ ಗ್ರಾಮದಲ್ಲಿ ಶಿರಾಡಿ ಚಾಮುಂಡೇಶ್ವರಿ ದೇವಾಲಯವಿದ್ದು, ಹತ್ತಿರವಿರುವ ಅನೇಕ ಗ್ರಾಮಗಳಿಂದ ಭಕ್ತಾದಿಗಳು
ಚಿತ್ರ ಕೃಪೆ : ಪಲ್ಲವಿ 
ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ವಸತಿ ವ್ಯವಸ್ಥೆಯಿದ್ದು , ನಮಗೂ ಹಳೆ ಜನ್ಮದ ಪುಣ್ಯದಿಂದ ಅಲ್ಲಿ ಉಳಿಯುವುದ್ದಕ್ಕೆ ಜಾಗ ಸಿಕ್ಕಿತು. ಸೂಪರ್ ಟೀ, ನಿಯಮಿತ ಬೋಂಡ ಹಾಗು ಉತ್ತಮ ಊಟ ದೊರೆತು, ನಾವು ತಂದ ತಿಂಡಿಗಳು ಬ್ಯಾಗ್ನಲ್ಲಿ ಉಳಿಯಿತು. ಸಂಜೆ ಮಾಡಲು ಕೆಲಸವಿಲ್ಲದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದರು. ಡಬಲ್ ಮೀನಿಂಗ್ ಡೈಲಾಗುಗಳು ಭರ್ಜರಿ ಮನರಂಜನೆಯನ್ನು ಒದಗಿಸಿದವು. ಪಲ್ಲವಿ ಬೆಂಗಳೂರಿನಿಂದ ಬರೆದುಕೊಂಡು ಬಂದ ಚೀಟಿಗಳು (dumb charade  ಆಡಿಸಕ್ಕೆ), ಗಲಾಟೆ ಮಾಡಲಿಕ್ಕೆ ಅನುಮತಿ ಸಿಗದ ಕಾರಣ ವ್ಯರ್ಥವಾಯಿತು. ಎಲ್ಲಾ ಹುಡುಗರಿಗೂ ಇದರಿಂದ ಸ್ವಲ್ಪ ಸಮಾಧಾನ :) 

ಚಿತ್ರ ಕೃಪೆ : ಶ್ರೀವತ್ಸ
ಚಿತ್ರ ಕೃಪೆ : ಶ್ರೀವತ್ಸ
ಚಿತ್ರ ಕೃಪೆ : ಶ್ರೀವತ್ಸ 
ಚಿತ್ರ ಕೃಪೆ : ಪಲ್ಲವಿ 



ರಾತ್ರಿ ಊಟ ಮುಗಿಸಿ ಮಲಗಿಕೊಳ್ಳುವ ವೇಳೆಗೆ 100ಕ್ಕೂ ಅಧಿಕ ಭಕ್ತಾದಿಗಳ ಆಗಮನ. ಎಲ್ಲಾ ಬೀಡಿ ಪ್ರಿಯರು. ಶುದ್ಧ ಗಾಳಿ ಸೇವಿಸೋಣ ಅಂತ ಾಡಿಗೆ ಹೋದ್ರೆ ಅಲ್ಲೂ ಲೋಕಲ್ ಬೀಡಿ ಹೊಗೆ. ರಾತ್ರಿ ಇಡೀ ಅವರ ಗಲಾಟೆ. ಬೆಳಿಗ್ಗೆ ಬೇಗ ಎದ್ದ ಕೆಲವು ಉತ್ಸಾಹಿ ತರುಣರು ಮತ್ತೆ ಕೋಟೆ ಕಡೆ ಧಾವಿಸಿದೆವು. ಇನ್ನು ಕೆಲವು ನಿರುತ್ಸಾಹಿ ತರುಣ ಪ್ಲಸ್ ತರುಣಿಯರು ದಬ್ಹಾಕ್ಕೊಂಡ್ ಮಲ್ಕೊಂಡಿದ್ರು.







ಆಮೇಕೆ, ಕೋಟೆ ನೋಡಿ, ಇಲ್ಲದ ರಾಜ ರಾಣಿನ ಮಾತಾಡಿಸಿ ಹೊರಡಲು ಅನುವಾದೆವು. ಈ ದಿನದ ದಾರಿ "ಮಂಜು ಮುಸುಕಿದ ಹಾದಿಯಲ್ಲ', ಫುಲ್ಲು "ರಕ್ತ ಪಿಪಾಸುಗಳು ಹುದುಗಿದ ಹಾದಿ'. ಕೆಲವರು 'Flipkart' ಪಾರ್ಸಲ್ ಮಾಡೋ ರೀತಿ ತಮ್ಮ ಕಾಲನ್ನು ಪ್ಯಾಕ್ ಮಾಡ್ಕೊಂಡ್ವು. ಇಂಬಳಗಳು ನೋವುರಹಿತವಾಗಿ ರಕ್ತ ಹಿಂಡಿದರೂ , ಜನಕ್ಕೆ ಅದರ ಬಗ್ಗೆ ದ್ವೇಷ.  

ಅಲ್ಲಿಂದ ಹೊರಟು ಒಂದು ಸಣ್ಣ ಫೋಟೋಗ್ರಫಿ ಸೆಶನ್ ಮುಗಿಸ್ಕೊಂಡು ಹೊರಟರೆ ಒಂದು ಪೇರಲೆಕಾಯಿ (ಸೀಬೇಕಾಯಿ) ಮರ ಎದುರಾಯಿತು. ಗಂಡು ಮಕ್ಳು ಮರ ಹತ್ತಿ ಡೀಸೆಂಟ್ ಆಗಿ ಹಣ್ಣು ತಿಂದ್ರೆ, ಹೆಣ್ಣು ಮಕ್ಳು ಹೊಡೆದಾಟ ಮಾಡಕೊಂಡ್ವು. ಇದ್ 2 ಜಡೆಗಳಲ್ಲೇ ಈ ಪರಿಯ ಹೊಡೆದಾಟ. ಇನ್ನೇನಾದ್ರು 8-10 ಜನ ಇದ್ರೆ ದೇವ್ರೇ ಗತಿ. ಮಿಲಿಟರಿ ಕರಿಸ್ಬೇಕಾಗಿತ್ತು ಆಮೇಲೆ. 
    
ಆಮೇಲೆ ಒಂದ್ ಲೆಫ್ಟ್ ತಗೊಂಡ್ ನೇರ ಓಯ್ತಾ ಇದ್ವಿ.ಸಡನ್ ಆಗಿ 'ಹೀಗೂ ಉಂಟೆ' ರೇಂಜ್ ಅಲ್ಲಿ ಫುಲ್ ಎಲ್ಲಾ ಪರ್ವತ ಪ್ರದೇಶಗಳು ಒಂದೇ ಬಾರಿಗೆ ಕಾಣುವ ಪ್ರದೇಶ' ಎದುರಾಯಿತು. ಜಾಸ್ತಿ ಕಷ್ಟ ಪಡದೆ ಪೀಕ್ ತಲುಪಿದ್ವಿ. ರೈಲು ಹಳಿಗಳನ್ನು ಸಹ ಇಲ್ಲಿಂದ ವಿಕ್ಷಿಸಬಹುದಿತ್ತು. ನಂತರ ಇಳಿಯೋ ಪ್ರೊಗ್ರಾಮ್. ದಾರಿಯ ಮಧ್ಯ 'ಮೊಸ್ರು ಬಾಯ್ಸ್' ತಂಡದಿಂದ ನ ನೃತ್ಯ ಕಾರ್ಯಕ್ರಮ ಇತ್ತು. ಆ ಡಾನ್ಸ್ ಬಗ್ಗೆ ಪಲ್ಲವಿ ಕಾಮೆಂಟ್ 'ನಾ ಎಂದೂ ಮರೆಯಲಾರೆ' "that  was 'ನಿಧಾನ ಮಾಡ್ರೋ. ಇಲ್ಲಾ ಅಂದ್ರೆ ಮೊಸ್ರು .............. 

ಅಲ್ಲಿಂದ ಶುರುವಾಯಿತು ದಟ್ಟ ಕಾನನ. wholesale ಇಂಬಳಗಳು. ಸುಮಾರು 2 ಗಂಟೆ ಘಟ್ಟ ಇಳಿದು ರೈಲ್ವೆ ಹಳಿಯನ್ನು ತಲುಪಿದೆವು.  ಅಲ್ಲಿ ಇಂಬಳ ತಗೆದು ಬಿಸಾಕಿ ಅರ್ಧ ಗಂಟೆಯ ನಡಿಗೆಯಲ್ಲಿ ಯಡಕುಮರಿ ಸ್ಟೇಷನ್ ತಲುಪಿದೆವು. ಅಲ್ಲಿ ಹೋಳಿಗೆ ತಿಂದು ಮೆಲುಕಿ ಹಾಕಿ, ನಂತರ ಆನೆ ಲದ್ದಿ ತುಂಬಿದ ಕಾನನದೊಳಕ್ಕೆ ಪ್ರವೇಶಿದೆವು. ನಮ್ಮ ಗುರಿ ಅಲ್ಲಿಂದ ಕೆಳಗಿಳಿದು ಕೆಂಪು ಹೊಳೆಯನ್ನು ದಾಟಿ ಮುಖ್ಯ ರಸ್ತೆಯನ್ನು ಮುಟ್ಟುವುದಾಗಿತ್ತು. ಬಿದಿರು ತುಂಬಿದ ಕಾಡಿನಲ್ಲಿ ನಮ್ಮ ಬರುವಿಕೆಯನ್ನು ಕಾದು ಕುಳಿತಿದ್ದ ಇಂಬಳದ ಸೈನ್ಯ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಪ್ರತಿಯೊಬ್ಬ ನಾಗರಿಕನಿಗೂ 50-100 ಸೈನಿಕರು ಮುತ್ತಿಗೆ ಹಾಕತೊಡಗಿದ್ದರು. ಮೊದಲ ಬಾರಿಗೆ ಮುಂಗಾರು ಮಳೆಯ ಆನಂದವೂ ಲಭ್ಯವಾಗಿತ್ತು. 

ಕೆಲವೇ ಗಂಟೆಗಳಲ್ಲಿ ಕೆಂಪು ಹೊಳೆ ತಲುಪಿದ್ದೆವು.  ಈ ಹೊಳೆ ಹಾನುಬಾಳಿನ ಎತ್ತಿನಹಳ್ಳ ದೇವಾಲಯದ ಕೆರೆ ಅಗನಿ ಸಮೀಪ ಹುಟ್ಟಿ, ಹಾರ್ಲೆ ಮುಖಾಂತರ ಹರಿದು,  ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿಗೆ ಸೇರುತ್ತದೆ. ಇದು ಭತ್ತ ಮತ್ತು ಕಾಫಿ ಬೆಳೆಯುವವರಿಗೆ ಹೆಚ್ಚು ಉಪಯೋಗ ವಾಗಿದ್ದು, ಕೃಷಿಕರಿಗೆ ಸಂಜೀವಿನಿಯಾಗಿದೆ.  ಗಿರೀಶ್ ಅವರು ಮೊದಲು ನದಿ ದಾಟುವ ಪ್ರಯತ್ನ ಮಾಡಿ ಯಶಸ್ವಿಯಾದ ಮೇಲೆ ನಾವು ಅವರನ್ನು ಅನುಕರಿಸಿದೆವು.          

ಚಿತ್ರ ಕೃಪೆ : ಪಲ್ಲವಿ

ನಮ್ಮ ಬಸ್ ಆ ಸ್ಥಳಕ್ಕೆ ಬರದೆ ಇದ್ದ ಕಾರಣ ಸ್ವಲ್ಪ ದೂರ ನಡೆಯಬೇಕಾಯಿತು. ಯಾರ ಮಂಡೆಗೆ ಬಂದ ಸುಯೋಚನೆಯೂ ಗೊತ್ತಿಲ್ಲ. ಬಾಟ್ಲೀಲಿ ಇದ್ದ ನೀರನ್ನು ಸಂಗ್ರಹಿಸಿ ನಿಂಬೆ ಹಣ್ಣನ್ನುಹಿಂಡಿ ಸಕ್ಕರೆ ಸೇರಿಸಿ ಪಾನಕ ಮಾಡಿದರು. ಸುರಾಸುರರು ಅಮೃತಕ್ಕಾಗಿ ನಡೆಸಿದ ಹೋರಾಟ ಅಲ್ಲಿ ದೃಶ್ಯ ತಳೆದಿತ್ತು. ಮುಂದೆ ದಾರಿಯಲ್ಲಿ ಟೀ ಸೇವಿಸಿ, ಉಜಿರೆಯ ಕಡೆ ಪಯಣ. ನಂತರ ಜನದಟ್ಟಣೆಯ ನಡುವೆಯಿದ್ದರೂ ಇನ್ನೂ ಸೌಂದರ್ಯ ಕಾಪಾಡಿಕೊಂಡಿರುವ  ಇರ್ಮಾಯಿ ಜಲಪಾತ ತಲುಪಿ ಬಹಳ ಅಗತ್ಯವಾಗಿದ್ದ ಸ್ನಾನವನ್ನು ಮುಗಿಸಿದೆವು. ನಂತರದ ಕಾರ್ಯ ಧರ್ಮಸ್ಥಳ ಮಂಜುನಾಥನ ದರ್ಶನ. ಸುಮಾರು 2 ವರ್ಷವಾಗಿತ್ತು  ನಾನು  ಮತ್ತು ಈ ದೇವ್ರು ಮೀಟ್ ಆಗಿ. ಸುಮಾರು ಬಾರಿ ಸುಬ್ರಮಣ್ಯಕ್ಕೆ ಕಾಲಿಟ್ಟರೂ ಇಲ್ಲ್ಲಿಗೆ ಬರಲಾಗಿರಲಿಲ್ಲ. ಅಲ್ಪ ಕಾಲದಲ್ಲಿ (ಸುಮಾರು ಒಂದು ಗಂಟೆ) ದರ್ಶನ ಮುಗಿಸಿ ಪ್ರಸಾದವನ್ನು ಸ್ವೀಕರಿಸಿ ಅಲ್ಲಿಂದ ಹೊರಟೆವು. 

ಬೆಂಗಳೂರಿಗೆ ತಲುಪುವಾಗ ಸುಮಾರು ಬೆಳಿಗ್ಗೆ 7 ಗಂಟೆಯಾಗಿತ್ತು. ನನ್ನಯ ಪ್ರೀತಿಯ ಆಫೀಸ್ ಕೆಲಸ ನನಗೆ ಶಬರಿ ಟೈಪ್ ನಲ್ಲಿ ಕಾಯ್ತಾ ಇತ್ತು. ಎಲ್ಲಾ ಚಾರಣ ಮಿತ್ರರಿಗೆ ಕೈ ಕೊಟ್ಟು (ವಿದಾಯ ಹೇಳಿ) ಮನೆಯ ಕಡೆಗೆ ಹೆಜ್ಜೆ ಹಾಕುವಾಗ ಮನಸ್ಸುಹಾಡನ್ನು ಗುನುಗುತ್ತಿತ್ತು.  

ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು .... ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ ಮನೆ ... ಎಲ್ಲಿ ಎಲ್ಲಿ ಎಲ್ಲಿ ನಮ್ ಮನೆ ..
ಎಷ್ಟೊಂದ್ ಹಕ್ಕಿ, ಇಲ್ಲಿ ಯಾವ್ದು ನನ್ ಹಕ್ಕಿ. 

ನಿಮ್ಮಯ 
ಸದಾಶಿವ ಬಾಯರಿ