ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.
:ಕಾವೇರಿ ಜಲಾನಯನ ಪ್ರದೇಶಗಳಲ್ಲಿ, ಭಾಗಮಂಡಲದ ಸುತ್ತ ಮುತ್ತ ಮಳೆ ಸುರಿಯುತ್ತಿದ್ದಾಗ ಕನ್ನಡ ನಾಡಿನ ಜೀವನದಿ ಕಾವೇರಿ ಉಕ್ಕಿ ಹರಿಯುತ್ತದೆ. ಕೊಡಗಿನ ರಮಣೀಯ ಹಸಿರು ರಾಶಿಯ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಇಲ್ಲಿನ ವಿಖ್ಯಾತ ಜಲಪಾತ ‘ಅಬ್ಬೆ’ ಮೈದುಂಬಿ ಧುಮ್ಮುಕ್ಕುತ್ತದೆ. ಹಾಲು ನೊರೆಯಂತೆ ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆವುದೇ ಮಳೆಗಾಲದಲ್ಲಿ. ಹೀಗಾಗೆ ಅಬ್ಬಿಗೆ ಮಳೆಗಾಲದ ಮದುಮಗಳು ಎಂಬ ಹೆಸರೂ ಇದೆ.
ರಭಸದಿಂದ ಭೋರ್ಗರೆವ ಅಬ್ಬಿಯ ಆರ್ಭಟ ಮಳೆಗಾಲದಲ್ಲಿ ಅರ್ಧ ಕಿಲೋ ಮೀಟರ್ ದೂರ ಕೇಳುತ್ತದೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಅಬ್ಬಿಯ ಜಲಪಾತ ಹಾಲು ನೊರೆಯಂತಹ ರಮಣೀಯ ದೃಶ್ಯದೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ನೋಡುಗರಿಗೆ ಅಮಿತಾನಂದವನ್ನು ನೀಡುತ್ತದೆ.
ಇಲ್ಲಿರುವ ತೂಗುಯ್ಯಾಲೆಯ ಮೇಲೆ ಮಳೆಯಲ್ಲಿ ತೋಯುತ್ತಾ, ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತ್ತಾ ಸಾಗಿದರೆ, ಧುಮ್ಮಿಕ್ಕುವ ಭೋರ್ಗರೆಯುತ್ತಾ ಧುಮ್ಮಿಕ್ಕುವ ಅಬ್ಬಿಯ ಜಲಹನಿಗಳೂ ನಿಮಗೆ ಪನ್ನೀರ ಎರಚುತ್ತಾ ಸ್ವಾಗತ ಕೋರುತ್ತವೆ. ಬೇಸಿಗೆಯಲ್ಲಿ ಒಣಗಿ ತನ್ನ ಸೊಬಗನ್ನು ಕಳೆದುಕೊಳ್ಳುವ ಮನೋಹರವಾದ ಅಬ್ಬಿ ಜಲಪಾತದ ಸೊಬಗನ್ನು ಸವಿಯಲು ಮಳೆಗಾಲವೇ ಸೂಕ್ತ.